Bible Languages

Indian Language Bible Word Collections

Bible Versions

English

Tamil

Hebrew

Greek

Malayalam

Hindi

Telugu

Kannada

Gujarati

Punjabi

Urdu

Bengali

Oriya

Marathi

Books

Acts Chapters

1 ಪ್ರಿಯ ಥೆಯೊಫಿಲನೇ, ಯೇಸು ಮಾಡಿದ ಕಾರ್ಯಗಳ ಬಗ್ಗೆ ಮತ್ತು ನೀಡಿದ ಬೋಧನೆಗಳ ಬಗ್ಗೆ ಪ್ರತಿಯೊಂದನ್ನು ನಾನು ನನ್ನ ಮೊದಲನೆಯ ಪುಸ್ತಕದಲ್ಲಿ ಬರೆದೆನು.
2 ನಾನು ಯೇಸುವಿನ ಇಡೀ ಜೀವಮಾನದ ಬಗ್ಗೆ ಅಂದರೆ ಆತನು ಪರಲೋಕಕ್ಕೆ ಏರಿಹೋಗುವವರೆಗೆ ನಡೆದ ಸಂಗತಿಗಳನ್ನು ಬರೆದೆನು. ಯೇಸು ಪರಲೋಕಕ್ಕೆ ಎತ್ತಲ್ಪಡುವದಕ್ಕಿಂತ ಮೊದಲು, ತಾನು ಆರಿಸಿಕೊಂಡಿದ್ದ ಅಪೊಸ್ತಲರೊಂದಿಗೆ [*ಅಪೊಸ್ತಲರು ವಿಶೇಷ ಸಹಾಯಕರಾಗಿ ಯೇಸುವಿನಿಂದ ಆರಿಸಲ್ಪಟ್ಟವರು.] ಮಾತಾಡಿದನು; ಅವರು ಮಾಡಬೇಕಾದದ್ದನ್ನು ಪವಿತ್ರಾತ್ಮನ [†ಪವಿತ್ರಾತ್ಮನು ಅಂದರೆ ದೇವರಾತ್ಮ, ಕ್ರಿಸ್ತನ ಆತ್ಮ ಮತ್ತು ಸಂತೈಸುವವನು. ದೇವರೊಡನೆ ಮತ್ತು ಕ್ರಿಸ್ತನೊಡನೆ ಸೇರಿ ಆತನು (ದೇವರ) ಕಾರ್ಯವನ್ನು ಲೋಕದ ಜನರ ಮಧ್ಯದಲ್ಲಿ ಮಾಡುವನು] ಸಹಾಯದಿಂದ ಅವರಿಗೆ ತಿಳಿಸಿದನು.
3 ಇದು ಆತನ ಮರಣಾನಂತರ ನಡೆದ ಸಂಗತಿ. ತಾನು ಜೀವಂತವಾಗಿರುವುದನ್ನು ಆತನು ಅಪೊಸ್ತಲರಿಗೆ ತೋರ್ಪಡಿಸಿದನು ಮತ್ತು ಶಕ್ತಿಯುತವಾದ ಅನೇಕ ಕಾರ್ಯಗಳನ್ನು ಮಾಡುವುದರ ಮೂಲಕ ಅದನ್ನು ನಿರೂಪಿಸಿದನು. ಯೇಸು ಜೀವಂತವಾಗಿ ಎದ್ದುಬಂದ ನಂತರದ ನಲವತ್ತು ದಿನಗಳ ಅವಧಿಯಲ್ಲಿ ಅಪೊಸ್ತಲರು ಆತನನ್ನು ಅನೇಕ ಸಲ ನೋಡಿದರು. ಯೇಸು ದೇವರ ರಾಜ್ಯದ ಕುರಿತು ಅಪೊಸ್ತಲರೊಂದಿಗೆ ಮಾತಾಡಿದನು.
4 ಒಮ್ಮೆ, ಯೇಸು ಅವರೊಂದಿಗೆ ಊಟ ಮಾಡುತ್ತಿದ್ದಾಗ, ಜೆರುಸಲೇಮನ್ನು ಬಿಟ್ಟುಹೋಗಬಾರದೆಂದು ಅವರಿಗೆ ಹೇಳಿದನು. “ತಂದೆಯು ನಿಮಗೊಂದು ವಾಗ್ದಾನವನ್ನು ಮಾಡಿದ್ದಾನೆ. ನಾನು ಮೊದಲೇ ಅದರ ಬಗ್ಗೆ ನಿಮಗೆ ತಿಳಿಸಿದ್ದೇನೆ. ಈ ವಾಗ್ದಾನವನ್ನು ಸ್ವೀಕರಿಸಿಕೊಳ್ಳಲು ಜೆರುಸಲೇಮಿನಲ್ಲಿ ಕಾದುಕೊಂಡಿರಿ.
5 ಯೋಹಾನನು ಜನರಿಗೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸಿದನು, ಆದರೆ ಇನ್ನು ಕೆಲವೇ ದಿನಗಳಲ್ಲಿ ನಿಮಗೆ ಪವಿತ್ರಾತ್ಮನಲ್ಲಿ ದೀಕ್ಷಾಸ್ನಾನವಾಗುವುದು” ಎಂದು ಆತನು ಹೇಳಿದನು.
6 ಅಪೊಸ್ತಲರು ಒಟ್ಟಾಗಿ ಸೇರಿದ್ದಾಗ, ಅವರು ಯೇಸುವಿಗೆ, “ಪ್ರಭುವೇ, ನೀನು ಯೆಹೂದ್ಯರಿಗೆ ಮತ್ತೆ ಅವರ ರಾಜ್ಯವನ್ನು ಕೊಡುವಂಥದ್ದು ಈ ಕಾಲದಲ್ಲೋ?” ಎಂದು ಕೇಳಿದರು.
7 ಯೇಸು ಅವರಿಗೆ, “ದಿನಗಳನ್ನು ಮತ್ತು ಕಾಲಗಳನ್ನು ನಿರ್ಧರಿಸುವ ಅಧಿಕಾರವಿರುವುದು ತಂದೆಯೊಬ್ಬನಿಗಷ್ಟೇ. ನೀವು ಅವುಗಳನ್ನು ತಿಳಿದುಕೊಳ್ಳಲಾಗುವುದಿಲ್ಲ.
8 ಆದರೆ ಪವಿತ್ರಾತ್ಮನು ನಿಮ್ಮ ಮೇಲೆ ಬಂದಾಗ ನೀವು ಬಲಹೊಂದಿ ಜೆರುಸಲೇಮಿನಲ್ಲಿಯೂ ಇಡೀ ಜುದೇಯದಲ್ಲಿಯೂ ಸಮಾರ್ಯದಲ್ಲಿಯೂ ಮತ್ತು ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರುವಿರಿ” ಎಂದನು.
9 ಯೇಸು ಈ ಸಂಗತಿಗಳನ್ನು ಅಪೊಸ್ತಲರಿಗೆ ಹೇಳಿದ ಮೇಲೆ ಅಪೊಸ್ತಲರು ನೋಡುತ್ತಿರುವಾಗಲೇ ಆಕಾಶಕ್ಕೆ ಎತ್ತಲ್ಪಟ್ಟನು. ಮೋಡವು ಆತನನ್ನು ಕವಿದುಕೊಂಡದ್ದರಿಂದ ಅವರು ಆತನನ್ನು ಕಾಣಲಾಗಲಿಲ್ಲ.
10 ಯೇಸು ಹೋಗುತ್ತಿರಲು ಅಪೊಸ್ತಲರು ಆಕಾಶವನ್ನೇ ನೋಡುತ್ತಾ ನಿಂತಿದ್ದರು. ಆಗ, ಬಿಳುಪಾದ ಬಟ್ಟೆಗಳನ್ನು ಧರಿಸಿಕೊಂಡಿದ್ದ ಇಬ್ಬರು ಪುರುಷರು (ದೇವದೂತರು) ಇದ್ದಕ್ಕಿದ್ದಂತೆ ಅವರ ಪಕ್ಕದಲ್ಲಿ ನಿಂತುಕೊಂಡು,
11 “ಗಲಿಲಾಯದವರೇ, ಏಕೆ ಆಕಾಶವನ್ನೇ ನೋಡುತ್ತಾ ನಿಂತುಕೊಂಡಿದ್ದೀರಿ? ಯೇಸು ನಿಮ್ಮ ಕಣ್ಣೆದುರಿನಲ್ಲಿ ಪರಲೋಕಕ್ಕೆ ಹೇಗೆ ಏರಿ ಹೋದನೋ ಅದೇ ರೀತಿಯಲ್ಲಿ ಹಿಂತಿರುಗಿ ಬರುತ್ತಾನೆ” ಎಂದು ಹೇಳಿದರು.
12 ಬಳಿಕ ಅಪೊಸ್ತಲರು ಆಲಿವ್ ಮರಗಳ ಗುಡ್ಡದಿಂದ ಜೆರುಸಲೇಮಿಗೆ ಹಿಂತಿರುಗಿಹೋದರು. (ಈ ಗುಡ್ಡಕ್ಕೂ ಜೆರುಸಲೇಮಿಗೂ ಸುಮಾರು ಅರ್ಧ ಮೈಲಿ ಅಂತರವಿದೆ.)
13 ಅಪೊಸ್ತಲರು ಪಟ್ಟಣವನ್ನು ಪ್ರವೇಶಿಸಿ ತಾವು ವಾಸವಾಗಿದ್ದಲ್ಲಿಗೆ ಹೋದರು. ಅದು ಮೇಲಂತಸ್ತಿನಲ್ಲಿತ್ತು. ಆ ಅಪೊಸ್ತಲರು ಯಾರಾರೆಂದರೆ: ಪೇತ್ರ, ಯೋಹಾನ, ಯಾಕೋಬ, ಅಂದ್ರೆಯ, ಫಿಲಿಪ್ಪ, ತೋಮ, ಬಾರ್ತೊಲೊಮಾಯ, ಮತ್ತಾಯ, ಯಾಕೋಬ (ಅಲ್ಫಾಯನ ಮಗ), ದೇಶಾಭಿಮಾನಿಯಾದ ಸಿಮೋನ ಮತ್ತು ಯೂದ (ಯಾಕೋಬನ ಮಗ).
14 ಅಪೊಸ್ತಲರೆಲ್ಲರೂ ಒಟ್ಟಾಗಿ ಸೇರಿದ್ದರು. ಅವರು ಒಂದೇ ಉದ್ದೇಶದಿಂದ ಎಡಬಿಡದೆ ಪ್ರಾರ್ಥಿಸುತ್ತಿದ್ದರು. ಕೆಲವು ಸ್ತ್ರೀಯರೂ ಯೇಸುವಿನ ತಾಯಿ ಮರಿಯಳೂ ಆತನ ಸಹೋದರರೂ ಅಪೊಸ್ತಲರ ಸಂಗಡವಿದ್ದರು.
15 ಕೆಲವು ದಿನಗಳಾದ ಮೇಲೆ ವಿಶ್ವಾಸಿಗಳು ಸಭೆ ಸೇರಿದ್ದರು. (ಅಲ್ಲಿ ಸುಮಾರು ನೂರಿಪ್ಪತ್ತು ಮಂದಿ ಇದ್ದರು.) ಪೇತ್ರನು ಎದ್ದುನಿಂತುಕೊಂಡು ಹೀಗೆಂದನು:
16 (16-17) “ಸಹೋದರರೇ, ಪವಿತ್ರಾತ್ಮನು ದಾವೀದನ ಮೂಲಕವಾಗಿ ಪವಿತ್ರ ಗ್ರಂಥದಲ್ಲಿ [‡ಪವಿತ್ರ ಗ್ರಂಥ “ಪವಿತ್ರ ಬರಹಗಳು” ಹಳೆ ಒಡಂಬಡಿಕೆ.] ಮುಂತಿಳಿಸಿದ್ದ ಸಂಗತಿ ನೆರವೇರಬೇಕಿತ್ತು. ನಮ್ಮ ಸ್ವಂತ ಗುಂಪಿನವರಲ್ಲಿ ಒಬ್ಬನಾದ ಯೂದನ ಬಗ್ಗೆ ದಾವೀದನು ಹೇಳಿದ್ದಾನೆ. ಯೂದನು ನಮ್ಮೊಂದಿಗೆ ಸೇವೆ ಮಾಡಿದನು. ಯೇಸುವನ್ನು ಬಂಧಿಸುವವರಿಗೆ ಯೂದನು ಮಾರ್ಗದರ್ಶಕನಾಗುತ್ತಾನೆಂದು ಪವಿತ್ರಾತ್ಮನು ತಿಳಿಸಿದ್ದನು.”
18 (ಈ ಕಾರ್ಯ ಮಾಡುವುದಕ್ಕಾಗಿ ಯೂದನಿಗೆ ಹಣ ಕೊಡಲಾಗಿತ್ತು. ಆ ಹಣದಿಂದ ಒಂದು ಹೊಲವನ್ನು ಅವನಿಗಾಗಿ ಕೊಂಡುಕೊಳ್ಳಲಾಯಿತು. ಆದರೆ ಯೂದನು ತಲೆಕೆಳಗಾಗಿ ಬಿದ್ದಾಗ ಅವನ ಹೊಟ್ಟೆ ಒಡೆದುಹೋಯಿತು. ಅವನ ಕರುಳೆಲ್ಲಾ ಹೊರಗೆ ಬಂದವು.
19 ಇದರ ಬಗ್ಗೆ ಜೆರುಸಲೇಮಿನ ಜನರೆಲ್ಲರಿಗೂ ತಿಳಿಯಿತು. ಆದಕಾರಣವೇ ಅವರು ಆ ಹೊಲಕ್ಕೆ ಅಕೆಲ್ದಮಾ ಎಂದು ಹೆಸರಿಟ್ಟರು. ಅವರ ಭಾಷೆಯಲ್ಲಿ ಅಕೆಲ್ದಮಾ ಅಂದರೆ “ರಕ್ತದ ಹೊಲ” ಎಂದರ್ಥ.)
20 ‘ಅವನ ಮನೆ ಹಾಳಾಗಲಿ! ಅಲ್ಲಿ ಯಾರೂ ವಾಸಿಸದಂತಾಗಲಿ!’ ಕೀರ್ತನೆ. 69:25] ಎಂದು ಕೀರ್ತನೆಗಳ ಪುಸ್ತಕದಲ್ಲಿ ಯೂದನ ಬಗ್ಗೆ ಬರೆದಿದೆ. ಅಲ್ಲದೆ ‘ಬೇರೊಬ್ಬನು ಅವನ ಕೆಲಸವನ್ನು ಪಡೆದುಕೊಳ್ಳಲಿ’ ಕೀರ್ತನೆ. 109:8] ಎಂದು ಸಹ ಬರೆದಿದೆ.
21 (21-22) “ಆದ್ದರಿಂದ ಬೇರೊಬ್ಬನು ನಮ್ಮೊಂದಿಗೆ ಸೇರಿ, ಯೇಸುವಿನ ಪುನರುತ್ಥಾನಕ್ಕೆ ಸಾಕ್ಷಿಯಾಗಿರಬೇಕು. ಪ್ರಭುವಾದ ಯೇಸು ನಮ್ಮಲ್ಲಿ ಹೋಗುತ್ತಾ ಬರುತ್ತಾ ಇದ್ದ ಕಾಲವೆಲ್ಲಾ ಅವನು ನಮ್ಮ ಗುಂಪಿನಲ್ಲಿದ್ದವರಲ್ಲಿ ಒಬ್ಬನಾಗಿರಬೇಕು. ಯೋಹಾನನು ದೀಕ್ಷಾಸ್ನಾನ ಕೊಡಲು ಆರಂಭ ಮಾಡಿದ ದಿನದ ಮೊದಲುಗೊಂಡು ಯೇಸುವು ನಮ್ಮ ಬಳಿಯಿಂದ ಪರಲೋಕಕ್ಕೆ ಎತ್ತಲ್ಪಟ್ಟ ದಿನದವರೆಗೂ ಅವನು ನಮ್ಮೊಂದಿಗಿದ್ದವನಾಗಿರಬೇಕು.”
23 ಅಪೊಸ್ತಲರು ಇಬ್ಬರನ್ನು ಸಭೆಯ ಮುಂದೆ ನಿಲ್ಲಿಸಿದರು. ಒಬ್ಬನು ಬಾರ್ಸಬನೆಂಬ ಯೋಸೇಫ. ಇವನನ್ನು ಯೂಸ್ತನೆಂದೂ ಕರೆಯುತ್ತಿದ್ದರು. ಮತ್ತೊಬ್ಬನು ಮತ್ತೀಯ.
24 (24-25) ಅಪೊಸ್ತಲರು ಹೀಗೆ ಪ್ರಾರ್ಥಿಸಿದರು: “ಪ್ರಭುವೇ, ನೀನು ಎಲ್ಲಾ ಜನರ ಮನಸ್ಸುಗಳನ್ನು ತಿಳಿದಿರುವೆ. ಈ ಕೆಲಸವನ್ನು ಮಾಡುವುದಕ್ಕಾಗಿ ಈ ಇಬ್ಬರಲ್ಲಿ ನೀನು ಯಾರನ್ನು ಆರಿಸಿಕೊಂಡಿರುವೆ ಎಂಬುದನ್ನು ನಮಗೆ ತೋರಿಸು. ಯೂದನು ಈ ಕೆಲಸಕ್ಕೆ ವಿಮುಖನಾಗಿ ತಾನು ಸೇರಬೇಕಿದ್ದಲ್ಲಿಗೆ ಹೊರಟುಹೋದನು. ಪ್ರಭುವೇ, ಅವನ ಸ್ಥಳದಲ್ಲಿ ಅಪೊಸ್ತಲನಾಗಿ ಯಾರು ನೇಮಕಗೊಳ್ಳಬೇಕೆಂಬುದನ್ನು ನಮಗೆ ತೋರಿಸು!”
26 ಬಳಿಕ ಅಪೊಸ್ತಲರು ಅವರಿಬ್ಬರಲ್ಲಿ ಒಬ್ಬನನ್ನು ಆರಿಸಿಕೊಳ್ಳಲು ಚೀಟಿಹಾಕಿದರು. ಚೀಟಿ ಮತ್ತೀಯನಿಗೆ ಬಂದದ್ದರಿಂದ ಹನ್ನೊಂದು ಮಂದಿಯೊಂದಿಗೆ ಅವನೂ ಅಪೊಸ್ತಲನಾದನು.
×

Alert

×